ಟ್ರಿನಿಡಾಡ್ ಮತ್ತು ಟೊಬ್ಯಾಗೋ

ಕ್ಯಾರಿಬೀಯನ್ ದ್ವೀಪಗಳ ಪೈಕಿ ಅತ್ಯಂತ ದಕ್ಷಿಣದಲ್ಲಿರುವ ಎರಡು ದ್ವೀಪಗಳು. ಉ. ಅ. 10ಲಿ 2-11ಲಿ21 ಮತ್ತು ಪೂ. ರೇ. 60ಲಿ30-61ಲಿ56 ನಡುವೆ ಇದೆ. ಇವೆರಡೂ ಸೇರಿ ಬ್ರಿಟಿಷ್ ಕಾಮನ್‍ವೆಲ್ತಿನಲ್ಲಿರುವ ಒಂದು ಸ್ವತಂತ್ರ ದೇಶ. ಟ್ರಿನಿಡಾಡ್ ದ್ವೀಪ ಟೊಬ್ಯಾಗೋಗಿಂತ ದೊಡ್ಡದು ; ವೆನಿeóÉ್ವೀಲದ ತೀರಕ್ಕೆ 7 ಮೈ. ದೂರದಲ್ಲಿದೆ. ಟ್ರಿನಿಡಾಡ್‍ಗೆ ಈಶಾನ್ಯದಲ್ಲಿ 20 ಮೈ. ದೂರದಲ್ಲಿ ಟೊಬ್ಯಾಗೋ ಇದೆ. ಈ ದ್ವೀಪಗಳ ತೀರಗಳಲ್ಲಿ ಹದಿನಾರು ಸಣ್ಣ ದ್ವೀಪಗಳಿವೆ. ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಒಟ್ಟು ವಿಸ್ತೀರ್ಣ 1980 ಚ. ಮೈ. (ಟ್ರಿನಿಡಾಡ್ 1864 ಚ. ಮೈ. ಟೊಬ್ಯಾಗೋ 116 ಚ. ಮೈ.) ; ಜನಸಂಖ್ಯೆ 10,26,750 (1970). ರಾಜಧಾನಿ ಪೋರ್ಟ್ ಆಫ್ ಸ್ಪೇನ್ (86,150).

	ಭೌತಲಕ್ಷಣ :	ಪರೀಯ ಖಾರಿಯೂ ಡ್ರ್ಯಾಗನ್ ಮೌತ್ ಕಡಲ್ಗಾಲುವೆಯೂ ಟ್ರಿನಿಡಾಡ್ ದ್ವೀಪವನ್ನು ವೆನಿeóÉ್ವೀಲದಿಂದ ಪ್ರತ್ಯೇಕಿಸುತ್ತವೆ. ಸು. 100 ಮೈ. ಉದ್ದ ಮತ್ತು 40. ಮೈ. ಅಗಲ ಇರುವ ಈ ದ್ವೀಪ ಆಯಾಕಾರದಲ್ಲಿದೆ. ಭೂಮಿ ಬಹುತೇಕ ಚಪ್ಪಟೆ. ಕೆಲವು ಕಡೆ ಅಲ್ಪ ಏರು-ತಗ್ಗುಗಳಿವೆ. ಅಲ್ಲಲ್ಲಿ ಜೌಗು ಪ್ರದೇಶಗಳಿವೆ. ಈ ದ್ವೀಪ ವೆನಿeóÉ್ವೀಲ ಭೂಭಾಗದ ಮುಂದುವರಿಕೆ. ಇದರ ಮೇಲ್ಮೈ ಲಕ್ಷಣ ವೆನಿeóÉ್ವೀಲದ ಓರಿನೋಕೋ ವಿಭಾಗದ್ದನ್ನು ಹೋಲುತ್ತದೆ. ದ್ವೀಪದ ಉತ್ತರ, ಮಧ್ಯ ಮತ್ತು ದಕ್ಷಿಣಗಳಲ್ಲಿ ಮೂರು ಗಿರಿಶ್ರೇಣಿಗಳು ಪೂರ್ವ-ಪಶ್ಚಿಮವಾಗಿ ಹಬ್ಬಿವೆ.

	ಉತ್ತರದ ಶ್ರೇಣಿಯಲ್ಲಿ ಅತ್ಯುನ್ನತ ಶಿಖರ ಎಲ್ ಸೆರ್ರೊ ಡೆಲ್ ಅರಿಪೊ (3085). ಮಧ್ಯದ ಶ್ರೇಣಿ ಸು. 1000 ಎತ್ತರ ನಿಲುಕುತ್ತದೆ. ದಕ್ಷಿಣದ ಶ್ರೇಣಿ ಇನ್ನೂ ತಗ್ಗು. ಈ ಶ್ರೇಣಿಗಳ ನಡುವೆ ಹಲವು ಸಣ್ಣ ತೊರೆಗಳು ಹರಿಯುತ್ತವೆ. ಪೂರ್ವ, ದಕ್ಷಿಣ ಮತ್ತು ಪಶ್ಚಿಮ ಕರಾವಳಿಯಲ್ಲಿ ವಿಸ್ತಾರವಾದ ಜೌಗು ನೆಲಗಳಿವೆ. ಕೆಲವು ಕಡೆ ಗುಲ್ಮವೃಕ್ಷಗಳಿವೆ. 

	ಟೊಬ್ಯಾಗೋದ ಉದ್ದ 32 ಮೈ. ; ಗರಿಷ್ಠ ಅಗಲ 11 ಮೈ. ಟೊಬ್ಯಾಗೋ ವೈಜ್ಞಾನಿಕವಾಗಿ ಲೆಸರ್ ಆಂಟಿಲೀಸ್ ದ್ವೀಪಗಳ ಭಾಗ. ಇದರ ಮೇಲ್ಮೈಯ ಲಕ್ಷಣ ಟ್ರಿನಿಡಾಡಿನದಕ್ಕಿಂತ ಹೆಚ್ಚು ಏರುತಗ್ಗುಗಳಿಂದ ಕೂಡಿದ್ದು. ಉತ್ತರದಲ್ಲಿರುವ ಗ್ರೆನಾಡ, ಸೇಂಟ್ ವಿನ್ಸೆಂಟ್ ಮತ್ತು ಇತರ ಜ್ವಾಲಾಮುಖೀಯ ದ್ವೀಪಗಳನ್ನು ಇದು ಹೋಲುತ್ತದೆ. ದ್ವೀಪದ ನಡುವಿನ ಜ್ವಾಲಾಮುಖೀಯ ಬೆಟ್ಟ 1,800ಗಿಂತ ಎತ್ತರಕ್ಕೇರಿದೆ. ಇದು ದ್ವೀಪದ ಬಹುಭಾಗವನ್ನು ಆವರಿಸಿಕೊಂಡಿದೆ. ಹಲವೆಡೆಗಳಲ್ಲಿ ಸಮುದ್ರದೊಳಕ್ಕೂ ಹರಡಿದೆ. ಕರಾವಳಿಯಲ್ಲಿ ಅಲ್ಲಲ್ಲಿ ಕಿರಿದಾದ ಮೈದಾನವುಂಟು. ಇದು ನೈಋತ್ಯ ಅಂಚಿನಲ್ಲಿ ಹೆಚ್ಚು ವಿಶಾಲ. 
(ಕೆ.ಆರ್.; ವಿ.ಜಿ.ಕೆ.)

	ವಾಯುಗುಣ : ಟ್ರಿನಿಡಾಡ್ ದ್ವೀಪ ಕ್ಯಾರಿಬೀಯನ್ ಚಂಡಮಾರುತದ ವಲಯಕ್ಕೆ ದಕ್ಷಿಣದಲ್ಲಿರುವುದರಿಂದ ಚಂಡಮಾರುತದ ಅಪಾಯವಿಲ್ಲ. ಇಲ್ಲಿಯದು ಉಷ್ಣವಲಯ ವಾಯುಗುಣ. ಉಷ್ಣತೆ ವರ್ಷವೆಲ್ಲ ಹೆಚ್ಚು ಕಡಿಮೆ ಒಂದೇ ರೀತಿ ಇರುತ್ತದೆ. ಮಧ್ಯಕ ವಾರ್ಷಿಕ ಉಷ್ಣತೆ ಎಲ್ಲೆಡೆಯಲ್ಲೂ 70ಲಿಈ ಗಿಂತ ಹೆಚ್ಚು. ಪೋರ್ಟ್ ಆಫ್ ಸ್ಪೇನ್‍ನಲ್ಲಿ ವಾರ್ಷಿಕ ಸರಾಸರಿ ಉಷ್ಣತೆ 77ಲಿಈ. ಗರಿಷ್ಠ ಉಷ್ಣತೆಯ ತಿಂಗಳು ಜುಲೈ. ಕನಿಷ್ಠ ಉಷ್ಣತೆ ಜನವರಿಯಲ್ಲಿ. ಇವೆರಡು ತಿಂಗಳುಗಳ ಉಷ್ಣತೆಗಳ ಅಂತರ ಕೇವಲ 35. ಟ್ರಿನಿಡಾಡಿನ ಉತ್ತರದ ಗಿರಿಶ್ರೇಣಿಯಲ್ಲಿ ಎತ್ತರಕ್ಕೆ ಹೋದಂತೆ ಉಷ್ಣತೆ ಸ್ವಲ್ಪ ಮಟ್ಟಿಗೆ ತಗ್ಗುತ್ತದೆ. ರಾತ್ರಿಯ ವೇಳೆ ತಂಪಾಗಿರುತ್ತದೆ.

	ಟ್ರಿನಿಡಾಡಿನ ಉತ್ತರ ಮತ್ತು ಮಧ್ಯ ಗಿರಿಶ್ರೇಣಿ ಪ್ರದೇಶಗಳಲ್ಲೂ ಟೊಬ್ಯಾಗೋದಲ್ಲೂ ವರ್ಷಕ್ಕೆ 100"ಗಿಂತ ಅಧಿಕ ಮಳೆಯಾಗುತ್ತದೆ. ಅಲ್ಲಲ್ಲಿ 150"ಗಿಂತ ಹೆಚ್ಚು ಮಳೆಯಾಗುವುದೂ ಉಂಟು. ಮೈದಾನಗಳಲ್ಲಿ ಸರಾಸರಿ ಮಳೆ 65"ಗಿಂತ ಕಡಿಮೆ. ಕೆಲವೆಡೆ 50"ಗಿಂತ ಕಡಿಮೆ ಮಳೆಯಾಗುವುದುಂಟು. ಜನವರಿಯಿಂದ ಮೇ ವರೆಗೆ ಹೆಚ್ಚು ಮಳೆಯಿಲ್ಲ. ಜೂನ್-ಡಿಸೆಂಬರ್ ಮಳೆಗಾಲ. ವರ್ಷವೆಲ್ಲ ಈ ದ್ವೀಪಗಳ ಮೇಲೆ ಈಶಾನ್ಯ ವಾಣಿಜ್ಯ ಮಾರುತಗಳು ಬೀಸುತ್ತವೆ.

	ಸಸ್ಯಪ್ರಾಣಿಜೀವನ : ಟ್ರಿನಿಡಾಡಿನ ಭೂರಚನೆಯಂತೆ ಅಲ್ಲಿಯ ಸಸ್ಯಪ್ರಾಣಿ ಜೀವನವೂ ನೆರೆಯ ವೆನಿeóÉ್ವೀಲದ್ದನ್ನೇ ಹೋಲುತ್ತದೆ. ಟೊಬ್ಯಾಗೋದು ಲೆಸರ್ ಆಂಟಿಲೀಸಿನದನ್ನು ಹೋಲುತ್ತದೆ. ಎರಡೂ ದ್ವೀಪಗಳಲ್ಲಿ ಎತ್ತರಕ್ಕೆ ಅನುಗುಣವಾಗಿ ನೈಸರ್ಗಿಕ ಸಸ್ಯಸಂಪತ್ತು ವ್ಯತ್ಯಾಸವಾಗುತ್ತದೆ. ದ್ವೀಪಗಳ ಉನ್ನತ ಗಿರಿಪ್ರದೇಶದಲ್ಲಿ ನಿತ್ಯಹಸುರಿನ ಉಷ್ಣವಲಯದ ಮಳೆಕಾಡುಗಳಿವೆ. ಟ್ರಿನಿಡಾಡಿನ ಮಧ್ಯ ಮತ್ತು ದಕ್ಷಿಣ ಗಿರಿಶ್ರೇಣಿಗಳಲ್ಲಿ ಎಲೆ ಉದುರುವ ಉಷ್ಣವಲಯ ಕಾಡುಗಳುಂಟು. ಅಲ್ಲಲ್ಲಿ ಸವಾನ ಹುಲ್ಲುಗಾಡು ಇದೆ. ಕರಾವಳಿಯಲ್ಲಿ ಸಮುದ್ರದಿಂದ ಪ್ರಭಾವಿತನಾದ ಕಾಡುಗಳಿವೆ. ಜವುಗು ನೆಲದಲ್ಲಿ ಗುಲ್ಮ ವೃಕ್ಷಗಳಿವೆ. ಉತ್ತರಶ್ರೇಣಿಯ ಕಣಿವೆಗಳಲ್ಲಿದ್ದ ಮೂಲಸಸ್ಯಗಳನ್ನು ತೆಗೆದು ಹಾಕಿ ಅಲ್ಲೆಲ್ಲ ಬಹುತೇಕ ಕೋಕೋ ತೋಟಗಳನ್ನು ಬೆಳೆಸಲಾಗಿದೆ. ಟ್ರಿನಿಡಾಡಿನ ಉಳಿದ ಭಾಗದಲ್ಲಿ ಕಬ್ಬು, ಜಂಬೀರ, ಬತ್ತ, ತೆಂಗು ಮುಂತಾದವನ್ನು ಬೆಳೆಸಲಾಗುತ್ತಿದೆ. ಜನವಸತಿಗಳ ಬಳಿ ಬಿದಿರುಮೆಳೆಗಳು ಬೆಳೆದಿವೆ. ಸರ್ಕಾರ ಕಾಡುಗಳಲ್ಲಿ ತೇಗ, ಮಹಾಗನಿ, ಸೈನ್ ಮುಂತಾದ ಮರಗಳನ್ನು ಬೆಳೆಸಿದೆ. ಟ್ರಿನಿಡಾಡಿನ ಕಾರೋನೀ ಜವುಗು ನೆಲದಲ್ಲಿ ಸ್ಕಾರ್ಲೆಟ್ ಐಬಿಸ್‍ಗಳ ಪಕ್ಷಿಧಾಮವುಂಟು. ಟೊಬ್ಯಾಗೋದ ಈಶಾನ್ಯದಲ್ಲಿರುವ 250 ಎಕರೆಗಳ ಸಣ್ಣ ದ್ವೀಪವಾದ ಲಿಟಲ್ ಟೊಬ್ಯಾಗೋದಲ್ಲಿ ಸಗ್ಗವಕ್ಕಿಗಳ ರಕ್ಷಣೆಗಾಗಿ ಪಕ್ಷಿಧಾಮವನ್ನು ನಿರ್ಮಿಸಲಾಗಿದೆ. ಇದು ಪ್ರವಾಸಿಗಳಿಗೊಂದು ಆಕರ್ಷಣೆ.

	ಇತಿಹಾಸ : ಟ್ರಿನಿಡಾಡ್ ದ್ವೀಪವನ್ನು ಕೊಲಂಬಸ್ 1498ರಲ್ಲಿ ಕಂಡಲಾ ಟ್ರಿನಿಡಾಡ್ ಅಥವಾ ಟ್ರಿನಿಟಿ ಎಂಬ ಹೆಸರು ನೀಡಿದವನು ಆತನೇ. ಆಗ ಈ ದ್ವೀಪದಲ್ಲಿ ಕ್ಯಾರಿಬ್-ಟಮನಾಕೊ ಗುಂಪಿನ ಅನೇಕ ಆದಿವಾಸಿ ಪಂಗಡಗಳ ಜನರಿದ್ದರು. ಮುಂದಿನ ಶತಮಾನಗಳಲ್ಲಿ ಸ್ಪೇನಿನ ಆಕ್ರಮಣ ಹಾಗೂ ಯುದ್ಧಗಳಿಗೆ ಈ ಜನ ಬಲಿಯಾದರು. 1532ರಲ್ಲಿ ಈ ದ್ವೀಪಕ್ಕೆ ಸ್ಪ್ಯಾನಿಷ್ ಗವರ್ನರೊಬ್ಬ ನೇಮಕವಾದ. 17ನೆಯ ಶತಮಾನದಲ್ಲಿ ಇದನ್ನು ವಶಪಡಿಸಿಕೊಳ್ಳಲು ಡಚ್ಚರು, ಇಂಗ್ಲಿಷರು ಹಾಗೂ ಫ್ರೆಂಚರು ಹೋರಾಡಿದರು. 1700ರಲ್ಲಿ ಇಲ್ಲಿ ಕೋಕೋ ಬೆಳೆ ಆರಂಭವಾಯಿತು. ಕೋಕೋ ತೋಟಗಳಲ್ಲಿ ದುಡಿಯಲು ನೀಗ್ರೋ ಗುಲಾಮರನ್ನು ತರಲಾಯಿತು. ಕೋಕೋ ಬೆಳೆಯಿಂದ ಟ್ರಿನಿಡಾಡ್ ಸ್ವಲ್ಪ ಕಾಲ ಪ್ರವರ್ಧಿಸಿತು. ಆದರೆ 1725ರಲ್ಲಿ ಬಂದ ರೋಗದಿಂದ ತೋಟಗಳು ನಷ್ಟಕ್ಕೊಳಗಾದುವು. ರೋಮನ್ ಕ್ಯಾತೋಲಿಕ್ ಮತದ ಯಾವ ವ್ಯಕ್ತಿಯಾದರೂ ಟ್ರಿನಿಡಾಡಿಗೆ ವಲಸೆ ಹೋಗಬಹುದೆಂಬ ಸ್ಪೇನ್ ದೊರೆಯ ಘೋಷಣೆಯಿಂದ (1783) ಯೂರೋಪಿನ ಅನೇಕ ರಾಜ್ಯಗಳ ಜನರೂ ಫ್ರೆಂಚ್ ಕ್ರಾಂತಿಯ ನಿರಾಶ್ರಿತರೂ ಈ ದ್ವೀಪಕ್ಕೆ ಬಂದು ನೆಲೆಸಿದರು. ಬಿಳಿಯರ ಸಂಖ್ಯೆ ಹೆಚ್ಚಿತು. ಮಾರ್ಟಿನೀಕ್ ದ್ವೀಪದಿಂದ ದಂಡೆತ್ತಿ ಬಂದ ಬ್ರಿಟಿಷ್ ಸೈನ್ಯ ಇಲ್ಲಿದ್ದ ಸ್ಪ್ಯಾನಿಷ್ ಸೇನೆಯನ್ನು ಸೋಲಿಸಿತು (1797). 1802ರಲ್ಲಿ ಆಮ್ಯಾನ್ ಕೌಲಿನ ಪ್ರಕಾರ ಕೊನೆಗೆ ಇದು ಬ್ರಿಟನ್ನಿನ ವರ್ಗವಾಯಿತು (1802). 1910ರಲ್ಲಿ ಗಣಿಗಳಿಂದ ಪೆಟ್ರೋಲ್ ಉತ್ಪಾದನೆ ಆರಂಭವಾಗುವ ವರೆಗೆ ಟ್ರಿನಿಡಾಡ್ ಆಗಿಂದಾಗ್ಗೆ ಆರ್ಥಿಕ ಮುಗ್ಗಟ್ಟುಗಳಿಗೆ ಒಳಗಾಗುತ್ತಿತ್ತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಸೇನಾ ನೆಲೆಯ ಸ್ಥಾಪನೆಗಾಗಿ ಈ ದ್ವೀಪಕ್ಕೆ 35106 ಎಕರೆ ಭೂಮಿಯನ್ನು ಬ್ರಿಟಿಷರು ಅಮೆರಿಕಕ್ಕೆ ಗೇಣಿಯಾಗಿ ಕೊಟ್ಟರು (1941).

	ಟೊಬ್ಯಾಗೋ ದ್ವೀಪವನ್ನೂ 1498ರಲ್ಲಿ ಕೊಲಂಬಸ್ ಕಂಡ. ಇದನ್ನು ಮೊದಲು ಡಚ್ಚರು ಆಕ್ರಮಿಸಿ (1632) ಇದಕ್ಕೆ ನ್ಯೂ ವಾಲ್ಕರನ್ ಎಂದು ಹೆಸರಿಟ್ಟರು. ಕ್ಯಾರಿಬೀಯನ್ ಸಮುದ್ರದಲ್ಲಿ ಈ ದ್ವೀಪದ ಸ್ಥಾನ ಮಹತ್ವದಿಂದಾಗಿ ಸ್ಪೇನ್, ಫ್ರಾನ್ಸ್, ನೆದರ್ಲೆಂಡ್ ಮತ್ತು ಇಂಗ್ಲೆಂಡ್‍ಗಳು ಇದನ್ನು ಆಕ್ರಮಿಸಿಕೊಳ್ಳಲು ಹೋರಾಡಿದವು. ಕೊನೆಗೆ ಇದು ಇಂಗ್ಲೆಂಡಿನ ವಶವಾಯಿತು. 19ನೆಯ ಶತಮಾನದಲ್ಲಿ ದ್ವೀಪದ ಆರ್ಥಿಕ ಸ್ಥಿತಿ ಹದಗೆಟ್ಟಿತು. 1834ರಲ್ಲಿ ವೆಸ್ಟ್ ಇಂಡೀಸ್‍ನಲ್ಲಿ ಗುಲಾಮಗಿರಿಯನ್ನು ರದ್ದು ಮಾಡಿದಾಗ ನೀಗ್ರೋಗಳು ಸ್ವತಂತ್ರರಾದರು. ಕಾರ್ಮಿಕರ ಅಭಾವ ಹೆಚ್ಚಿತು. ಕಬ್ಬಿನ ಗದ್ದೆಗಳಲ್ಲಿ ಹಾಗೂ ಪ್ಲಾಂಟೇಷನ್‍ಗಳಲ್ಲಿ ಕೆಲಸ ಮಾಡಲು ಏಷ್ಯದಿಂದ ಭಾರತೀಯರನ್ನೂ (1845) ಚೀನಿಯರನ್ನೂ (1853) ಕರೆಸಿಕೊಳ್ಳಲಾಯಿತು. 1899ರ ಹೊತ್ತಿಗೆ ಈ ದ್ವೀಪ ಟ್ರಿನಿಡಾಡ್ ಆಡಳಿತ ವ್ಯವಸ್ಥೆಗೆ ಒಳಪಟ್ಟಿತು.

	ಬ್ರಿಟನ್ನು 1956ರಲ್ಲಿ ಟ್ರಿನಿಡಾಡ್ ಮತ್ತು ಟೊಬ್ಯಾಗೋ ದ್ವೀಪಗಳಿಗೆ ಪರಿಮಿತ ಸ್ವಾತಂತ್ರ್ಯ ನೀಡಿತು. 1958ರ ಜನವರಿಯಲ್ಲಿ ಇವು ವೆಸ್ಟ್ ಇಂಡೀಸ್ ಒಕ್ಕೂಟವನ್ನು ಸೇರಿದುವು. 1961ರಲ್ಲಿ ಜಾರಿಗೆ ಬಂದ ಹೊಸ ಸಂವಿಧಾನದಂತೆ ಇವಕ್ಕೆ ಸಂಪೂರ್ಣ ಆಂತರಿಕ ಸ್ವಯಮಧಿಕಾರ ಪ್ರಾಪ್ತವಾಯಿತು. 1962ರ ಮೇ 31ರಂದು ವೆಸ್ಟ್ ಇಂಡೀಸ್ ಒಕ್ಕೂಟ ಮುರಿದುಬಿದ್ದಾಗ ಟ್ರಿನಿಡಾಡ್ ಮತ್ತು ಟೊಬ್ಯಾಗೋ ಒಂದು ಸ್ವತಂತ್ರ ರಾಷ್ಟ್ರವಾಗಿ ಕಾಮನ್‍ವೆಲ್ತಿನಲ್ಲಿ ಉಳಿಯಿತು. 1967ರಲ್ಲಿ ಇದು ಅಮೆರಿಕನ್ ರಾಜ್ಯಗಳ ಸಂಘಟನೆಯ ಸದಸ್ಯತ್ವ ಪಡೆಯಿತು. 1970ರಲ್ಲಿ ಕಪ್ಪು ಜನರ ದಂಗೆಯೂ ಸೈನ್ಯದ ಬಂಡಾಯವೂ ಸಂಭವಿಸಿದ್ದರಿಂದ ಜರೂರು ಪರಿಸ್ಥಿತಿಯನ್ನು ಘೋಷಿಸಲಾಯಿತು. 1971ರಲ್ಲಿ ವಿಸ್ತøತವಾದ ಪ್ರತಿನಿಧಿ ಸಭೆಗೆ ನಡೆದ ಚುನಾವಣೆಯಲ್ಲಿ ಆಳುವ ಪೀಪಲ್ಸ್ ನ್ಯಾಷನಲ್ ಮೂವ್‍ಮೆಂಟ್ ಪಕ್ಷಕ್ಕೇ ಬಹುಮತ ಬಂತು. ಆದರೆ ವಿರೋಧ ಪಕ್ಷಗಳು ಈ ಚುನಾವಣೆಯನ್ನು ಬಹಿಷ್ಕರಿಸಿದ್ದುವು. ಕೇವಲ 32 ಮತದಾರರು ಮತ ನೀಡಿದರು. ವಿರೋಧ ಪಕ್ಷ ಇಲ್ಲದ್ದರಿಂದ ಸಂವೈಧಾನಿಕವಾಗಿ ಹಲವಾರು ತೊಡಕುಗಳು ಉದ್ಭವಿಸಿದುವು. ದೇಶದಲ್ಲಿದ್ದ ಜರೂರು ಪರಿಸ್ಥಿತಿಯನ್ನು ಕೊನೆಗೊಳಿಸಲಾಗಿದೆ. ರಾಜಕೀಯ ಸುಧಾರಣೆಗಳನ್ನು ಜಾರಿಗೆ ತರಲು ಪ್ರಯತ್ನಗಳಾಗುತ್ತಿವೆ. 

	ಸಂವಿಧಾನ ಮತ್ತು ಸರ್ಕಾರ :	1962ರ ಟ್ರಿನಿಡಾಡ್ ಮತ್ತು ಟೊಬ್ಯಾಗೋ ಸ್ವಾತಂತ್ರ್ಯ ಅಧಿನಿಯಮದ ಪ್ರಕಾರ ಹೊಸ ಸಂವಿಧಾನ ರಚನೆಯಾಗಿದೆ. ಆಡಳಿತ, ವಿಧಾನಾಂಗ, ನ್ಯಾಯಾಂಗ, ಸರ್ಕಾರಿ ಸೇವೆ ಇತ್ಯಾದಿಗಳ ವ್ಯವಸ್ಥೆಯಾಗಿದೆ.

	ಗವರ್ನರ್-ಜನರಲ್ ರಾಷ್ಟ್ರದ ಪ್ರಮುಖ. ಆತನನ್ನು ಪ್ರಧಾನ ಮಂತ್ರಿಯ ಸಲಹೆಯ ಮೇರೆಗೆ ಬ್ರಿಟನ್ನಿನ ರಾಣಿ ನೇಮಕ ಮಾಡುತ್ತಾಳೆ. ಪ್ರಧಾನಿಯೇ ಸಂಪುಟದ ನಾಯಕ. ಸಂಸತ್ತಿನಲ್ಲಿ ಎರಡು ಸದನಗಳಿವೆ : ಸೆನೇಟ್ ಮತ್ತು ಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಫ್ರೆಸೆಂಟೆಟೀವ್ಸ್). ಮೇಲ್ಮನೆಯಾದ ಸೆನೇಟಿನ ಸದಸ್ಯರು 24. ಪ್ರತಿನಿಧಿಗಳ ಸಭೆಯಲ್ಲಿ 36 ಸದಸ್ಯರಿದ್ದಾರೆ. ಸಂಸತ್ತಿನ ಅವಧಿ 5 ವರ್ಷ. ಸೆನೇಟಿನ ಸದಸ್ಯರನ್ನು ಪ್ರಧಾನಮಂತ್ರಿ ಮತ್ತು ವಿರೋಧ ಪಕ್ಷ ನಾಯಕರ ಸಲಹೆಯ ಮೇರೆಗೆ ಗವರ್ನರ್-ಜನರಲ್ ನೇಮಕ ಮಾಡುತ್ತಾನೆ.

	ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಕೌಂಟಿಗಳ ಮತ್ತು ಟೊಬ್ಯಾಗೋ ವಿಭಾಗದ ಸ್ಥಳೀಯ ಆಡಳಿತಕ್ಕೆ ಆಯ್ಕೆಯಾದ ಪರಿಷತ್ತುಗಳಿವೆ. ಮೂರು ನಗರಗಳಾದ ಪೋರ್ಟ್ ಆಫ್ ಸ್ಪೇನ್, ಸ್ಯಾನ್ ಫನ್ರ್ಯಾಂಡೋ ಮತ್ತು ಅರೀಮದ ಆಡಳಿತಕ್ಕೆ ಮೇಯರುಗಳನ್ನು ಒಳಗೊಂಡ ನಗರಸಭೆಗಳಿವೆ. 

	ನ್ಯಾಯಾಂಗ : ಟ್ರಿನಿಡಾಡ್ ಮತ್ತು ಟೊಬ್ಯಾಗೋದ ನ್ಯಾಯವ್ಯವಸ್ಥೆ ಬ್ರಿಟನ್ನಿನಲ್ಲಿರುವಂತೆ ರೂಪಿತವಾಗಿದೆ. ಪರಮೋಚ್ಚ ನ್ಯಾಯಾಲಯದಲ್ಲಿ ಶ್ರೇಷ್ಠ ನ್ಯಾಯಾಧಿಪತಿಯೂ ಹತ್ತು ಮಂದಿ ನ್ಯಾಯಮೂರ್ತಿಗಳೂ ಇರುತ್ತಾರೆ. ಸಿವಿಲ್ ವ್ಯವಹಾರಗಳ ಪರಮೋಚ್ಚ ನ್ಯಾಯಾಲಯವೊಂದು ಫೋರ್ಟ್ ಆಫ್ ಸ್ಪೇನಿನಲ್ಲಿ ಉಪಸ್ಥಿತವಾಗಿರುತ್ತದೆ. ಇತರ ಸಿವಿಲ್ ನ್ಯಾಯಾಲಯಗಳು ಟೋಬ್ಯಾಗೋ, ಸ್ಯಾನ್ ಫನ್ರ್ಯಾಂಡೋ ಮತ್ತು ಅವಶ್ಯವಿದ್ದರೆ ಇತರ ಕಡೆಗಳಲ್ಲಿ ವಿಚಾರಣೆ ನಡೆಸುತ್ತವೆ. ಕ್ರಿಮಿನಲ್ ಮೊಕದ್ದಮೆಗಳನ್ನೂ ಪರಮೋಚ್ಚ ನ್ಯಾಯಾಲಯದ ನ್ಯಾಯಾಮೂರ್ತಿಗಳು ವಿಚಾರಿಸುತ್ತಾರೆ. ಇವರೊಂದಿಗೆ 9-12 ಸದಸ್ಯರ ನ್ಯಾಯದರ್ಶಿ ಮಂಡಲಿ ಇರುತ್ತದೆ. ಸಣ್ಣ ತಕ್ಸೀರುಗಳ ವಿಚಾರಣೆಗೆ 28 ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳಿವೆ.

	ಶಿಕ್ಷಣ  : 6-12 ವರ್ಷಗಳ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಪ್ರಾಥಮಿಕ ಶಿಕ್ಷಣವಿದೆ. ಸೆಕೆಂಡರಿ ಶಿಕ್ಷಣ ಸರ್ಕಾರಿ ಹಾಗೂ ಖಾಸಗಿ ವಿದ್ಯಾಸಂಸ್ಥೆಗಳ ಮೂಲಕ ನಡೆಯುತ್ತದೆ. 1970ರಲ್ಲಿ 472 ಪ್ರಾಥಮಿಕ ಶಾಲೆಗಳೂ 44 ಸೆಕೆಂಡರಿ ಶಾಲೆಗಳೂ ಇದ್ದುವು. 1959ರಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಶಾಲೆ ಸ್ಥಾಪಿತವಾಯಿತು. ಮೂರು ಶಿಕ್ಷಣ ತರಬೇತು ಶಾಲೆಗಳಿವೆ. ಸೇಂಟ್ ಆಗಸ್ಟೀನಿನಲ್ಲಿ ವೆಸ್ಟ್ ಇಂಡೀಸ್ ವಿಶ್ವವಿದ್ಯಾಲಯವಿದೆ.

	ಜನ, ಜೀವನ : ಟ್ರಿನಿಡಾಡ್ ಮತ್ತು ಟೊಬ್ಯಾಗೋ ರಾಜ್ಯದ ಜನಸಂಖ್ಯೆ 1026750(1970). ಕಾಕೇಷಿಯನರು, ನಿಗ್ರೋಗಳು, ಭಾರತೀಯ ಸಂಜಾತರು, ಸಿರಿಯನರು, ಚೀನಿಯರು ಇದ್ದಾರೆ. ಟ್ರಿನಿಡಾಡಿನಲ್ಲಿ 43% ನೀಗ್ರೋಗಳು, 36% ಭಾರತೀಯ ಸಂಜಾತರು, 3% ಐರೋಪ್ಯರು, 2% ಚೀನೀಯರು ಮತ್ತು 16% ಇತರರು. ಟೊಬ್ಯಾಗೋದಲ್ಲಿ ನೀಗ್ರೋಗಳೇ ಅಧಿಕ. ನಗರ ಪ್ರದೇಶಗಳಲ್ಲೂ ತೈಲ ಗಣಿಗಳಲ್ಲೂ ಅಷ್ಟು ಫಲವತ್ತಾಗಿಲ್ಲದ ವ್ಯವಸಾಯ ಭೂಮಿಗಳಲ್ಲೂ ನೀಗ್ರೋಗಳು ಹೆಚ್ಚು. ಫಲವತ್ತಾದ ಪ್ರದೇಶಗಳಲ್ಲಿ ಭಾರತೀಯರಿದ್ದಾರೆ. ವಾಣಿಜ್ಯ, ಕೈಗಾರಿಕೆ ಮತ್ತು ಹಲವು ವೃತ್ತಿಗಳಲ್ಲಿ ಭಾರತೀಯರು ಯಶಸ್ವಿಯಾಗಿದ್ದಾರೆ. ನೀಗ್ರೋಗಳೂ ಭಾರತೀಯರೂ ತಂತಮ್ಮ ಸಾಂಸ್ಕøತಿಕ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿದ್ದಾರೆ.

	ಆರ್ಥಿಕತೆ : ಇಲ್ಲಿಯ ಮುಖ್ಯ ಬೆಳೆಗಳು ಕಬ್ಬು, ಬತ್ತ, ಕೋಕೋ, ತೆಂಗು, ನಿಂಬೆ ಜಾತಿಯ ಹಣ್ಣುಗಳು. 1953ರಿಂದ ವಿಶಿಷ್ಟ ಜಾತಿಯ ಹುಲ್ಲು ಬೆಳೆಯುತ್ತಿರುವುದರಿಂದ ಪಶುಪಾಲನೆ ಹಾಗೂ ಹೈನುಗಾರಿಕೆ ಅಭಿವೃದ್ಧಿ ಹೊಂದಿವೆ. ಮುಖ್ಯ ಖನಿಜೋತ್ಪನ್ನಗಳು ಆಸ್ಫಾಲ್ಟ್, ಪೆಟ್ರೋಲ್ ಹಾಗೂ ಅನಿಲ. ಕರಾವಳಿಯಲ್ಲಿ ಮೀನುಗಾರಿಕೆ ಒಂದು ಕಸುಬು. ಉಷ್ಣವಲಯದ ವಿಶೇಷ ಬೆಳೆಗಳನ್ನು ಮುಖ್ಯವಾಗಿ ರಫ್ತಿಗಾಗಿ ಬೆಳೆಯುತ್ತಾರೆ. ಉತ್ಪಾದಿತ ಸರಕುಗಳು ಆಮದಾಗುತ್ತವೆ.

	ಸಾರಿಗೆ : ಪೋರ್ಟ್ ಆಫ್ ಸ್ಪೇನಿನಿಂದ ಪಶ್ಚಿಮ ಮತ್ತು ಮಧ್ಯ ಟ್ರಿನಿಡಾಡಿಗೆ 109 ಮೈ. ರೈಲುಮಾರ್ಗಗಳಿದ್ದುವು. ಈಗ ಪೋರ್ಟ್ ಆಫ್ ಸ್ಪೇನಿನಿಂದ ಅರೀಮಕ್ಕೆ ಪ್ರಯಾಣಿಕ ರೈಲುಗಳು ಮಾತ್ರ ಓಡುತ್ತವೆ. ನಷ್ಟಕರವಾದ ಮಾರ್ಗಗಳನ್ನು ಮುಚ್ಚಲಾಗಿದೆ. ರಸ್ತೆ ವ್ಯವಸ್ಥೆ ಅಭಿವೃದ್ಧಿ ಹೊಂದಿದೆ. 1972ರಲ್ಲಿ 4.178 ಮೈ. ಪೋರ್ಟ್ ಆಫ್ ಸ್ಪೇನ್ ಮುಖ್ಯ ಬಂದರು. ಇಲ್ಲಿಂದ ಟೊಬ್ಯಾಗೋದ ಸ್ಕಾರ್‍ಬರಾಗೆ ತೀರಮಾರ್ಗದಲ್ಲಿ ಹಡಗುಗಳು ಸಂಚರಿಸುತ್ತವೆ. ದೇಶದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೀಯಾರ್ಕೋ.

	ಟ್ರಿನಿಡಾಡ್ ಮತ್ತು ಟೊಬ್ಯಾಗೋದ ರಾಜಧಾನಿ ಪೋರ್ಟ್ ಆಫ್ ಸ್ಪೇನ್ (86,150). ಇನ್ನು ಎರಡು ದೊಡ್ಡ ಪಟ್ಟಣಗಳು ಸ್ಯಾನ್ ಫರ್ನಾಂಡೋ (34,950) ಮತ್ತು ಅರೀಮ (11,000).
(ವಿ.ಜಿ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ